ಹಾಸನ ಜಿಲ್ಲೆಯ ಆಲೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಮಾವನೂರು ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಆಲೂರಿನಿಂದ ಹಾಸನದ ಕಡೆಗೆ ತೆರಳುತ್ತಿದ್ದ ಓಮಿನಿ ಕಾರು ಡಿವೈಡರ್ ಹತ್ತಿಸಿ, ವಿರುದ್ಧ ದಿಕ್ಕಿನಿಂದ ಸಕಲೇಶಪುರದತ್ತ ಸಾಗುತ್ತಿದ್ದ ಸ್ವಿಫ್ಟ್ ಕಾರಿಗೆ ಗುದ್ದಿದ ಪರಿಣಾಮ ಈ ದುರಂತ ನಡೆದಿದೆ.

ಅಪಘಾತದ ತೀವ್ರತೆಗೆ ಎರಡೂ ವಾಹನಗಳು ನುಜ್ಜು ಗುಜ್ಜಾಗಿವೆ. ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗಂಡ-ಹೆಂಡತಿಗೆ ಗಾಯಗಳಾಗಿದ್ದು, ಅವರ ಜೊತೆಗಿದ್ದ ಚಿಕ್ಕ ಮಗುವಿನ ಕೈ ಮುರಿದಿದೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ, ಓಮಿನಿ ಕಾರಿನ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯರು ತಕ್ಷಣ ಆಂಬುಲೆನ್ಸ್ ಮೂಲಕ ಹಾಸನ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನೆ ಬಳಿಕ ಸ್ಥಳದಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ, ನೂರಾರು ಜನರು ಸೇರುವ ಮೂಲಕ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ಅಪಘಾತಗೊಂಡ ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.