ಬೆಂಗಳೂರು, ಮಾರ್ಚ್ 06: ಇಂದು ರಾಜ್ಯದ ಎಲ್ಲರ ಗಮನ ಕರ್ನಾಟಕ ಬಜೆಟ್ 2026-27 ಮೇಲೆ ನೆಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಇದು ಅವರ ರಾಜಕೀಯ ಬದುಕಿನ ದಾಖಲೆಯ 17ನೇ ಬಜೆಟ್ ಆಗಿದೆ.
ಈ ವರ್ಷದ ಬಜೆಟ್ ಗಾತ್ರವು ಸುಮಾರು ನಾಲ್ಕೂವರೆ ಲಕ್ಷ ಕೋಟಿ ರೂಪಾಯಿಗೆ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷವಾದ 2025ರಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆದಾಯ ಸಂಗ್ರಹವಾಗದ ಹಿನ್ನೆಲೆ, ಅದರ ಪರಿಣಾಮ ಈ ವರ್ಷದ ಬಜೆಟ್ ಮೇಲೂ ಗೋಚರಿಸುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳುತ್ತಿದ್ದಾರೆ.
LIVE Updates
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1995-96ರಲ್ಲಿ ಮೊದಲ ಬಾರಿ ಬಜೆಟ್ ಮಂಡಿಸಿದ್ದರು. ಕಳೆದ ಸುಮಾರು 30 ವರ್ಷಗಳಲ್ಲಿ ಅವರು ಈಗಾಗಲೇ 16 ಬಜೆಟ್ ಮಂಡಿಸಿದ್ದು, ಈ ಬಾರಿ 17ನೇ ಬಜೆಟ್ ಮಂಡಿಸುತ್ತಿದ್ದಾರೆ.
2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಹಣಕಾಸು ಇಲಾಖೆಯನ್ನೂ ಹೊಂದಿದ್ದು, ಆ ಅವಧಿಯ ಎಲ್ಲಾ ಬಜೆಟ್‌ಗಳನ್ನು ಅವರೇ ಮಂಡಿಸಿದ್ದರು. ಎರಡನೇ ಬಾರಿ ಮುಖ್ಯಮಂತ್ರಿಯಾದ ನಂತರ ಈಗಾಗಲೇ ಮೂರು ಬಜೆಟ್ ಮಂಡಿಸಿರುವ ಅವರು, ಇದೀಗ ನಾಲ್ಕನೇ ಬಜೆಟ್ ಮಂಡನೆಗೆ ಮುಂದಾಗಿದ್ದಾರೆ.
ಈ ಬಾರಿ ಬಜೆಟ್‌ನಲ್ಲಿ ಹಲವಾರು ಮಹತ್ವದ ಯೋಜನೆಗಳ ಘೋಷಣೆ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಪ್ರಮುಖವಾಗಿ:
- ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ
- ಪಂಜಾಬ್ ಮಾದರಿಯಲ್ಲಿ ರೈತರಿಗೆ ಟೋಲ್ ಫ್ರೀ ಪ್ರಯಾಣ ವ್ಯವಸ್ಥೆ
- ನಗರಗಳ ಅಭಿವೃದ್ಧಿಗೆ ಮೆಗಾ ಸಿಟಿ ಯೋಜನೆ
- ಟನಲ್ ರೋಡ್ ಮತ್ತು ಡಬಲ್ ಡೆಕ್ಕರ್ ರಸ್ತೆ ಯೋಜನೆ ವಿಸ್ತರಣೆ
- ರೈತರ ಎಲ್ಲಾ ಬೆಳೆಗಳಿಗೆ ವಿಶೇಷ ವಿಮಾ ಯೋಜನೆ
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಜನರಲ್ಲಿ ಸಾಕಷ್ಟು ಪ್ರಭಾವ ಬೀರಿವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಈ ಯೋಜನೆಗಳ ಕಾರಣದಿಂದ ರಾಜ್ಯದ ಆರ್ಥಿಕ ಸ್ಥಿತಿ ಮೇಲೆ ಒತ್ತಡ ಬಂದಿದೆ ಎಂಬ ಚರ್ಚೆಯೂ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ 2026-27ರ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ಮೀಸಲಿಡುವ ಸಾಧ್ಯತೆ ಇದೆ. ಜೊತೆಗೆ ಸರ್ಕಾರ ಅಬಕಾರಿ ಸೆಸ್ ಹಾಗೂ ಇಂಧನ ಸೆಸ್ ಹೆಚ್ಚಿಸುವ ಸಾಧ್ಯತೆಗಳೂ ಇದೆ ಎಂದು ಹೇಳಲಾಗುತ್ತಿದೆ.
- 2024-2025: ₹3.71 ಲಕ್ಷ ಕೋಟಿ
- 2025-2026: ₹4.09 ಲಕ್ಷ ಕೋಟಿ
ಈ ಬಾರಿ ಬಜೆಟ್ ಗಾತ್ರ ಇನ್ನಷ್ಟು ಹೆಚ್ಚಾಗಿ ಸುಮಾರು ₹4.5 ಲಕ್ಷ ಕೋಟಿಗೆ ತಲುಪುವ ಸಾಧ್ಯತೆ ಇದೆ.
ಈ ಬಜೆಟ್‌ನಲ್ಲಿ ಯಾವೆಲ್ಲಾ ಹೊಸ ಯೋಜನೆಗಳು ಘೋಷಣೆ ಆಗುತ್ತವೆ, ಯಾವ ವಸ್ತುಗಳು ದುಬಾರಿಯಾಗುತ್ತವೆ, ಯಾವ ಜಿಲ್ಲೆಗಳಿಗೆ ಎಷ್ಟು ಅನುದಾನ ಸಿಗಲಿದೆ ಎಂಬುದರ ಕ್ಷಣಕ್ಷಣದ ಮಾಹಿತಿಗಾಗಿ ಈ ಲೈವ್ ಬ್ಲಾಗ್‌ನಲ್ಲಿ ಅಪ್ಡೇಟ್ಸ್ ನೀಡಲಾಗುತ್ತದೆ.
.png)
0 Comments