ಹೊಳೆನರಸೀಪುರ : ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದ ಬಡಾವಣೆಗಳ ಒಳಗೆ ಮತ್ತು ಸುತ್ತಮುತ್ತ ಚರಂಡಿಗಳು ಸ್ವಚ್ಛತೆಯಿಂದ ದೂರ ಉಳಿದಿರುವ ಕಾರಣ ನಾಗರಿಕರು ಗಬ್ಬು ವಾಸನೆಯ ನಡುವೆ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸ್ವಚ್ಛಗೊಳಿಸುವಂತೆ ಸೂಚನೆ ನೀಡಿದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳದಿರುವುದು ಆರೋಪವಾಗಿದೆ.
ವಾರ್ಡ್ ನಂಬರ್ 22ರಲ್ಲಿ ಸಿಸ್ಟಮ್‌ಗಳು ಕೆಟ್ಟು ಹಲವು ತಿಂಗಳುಗಳು ಕಳೆದಿದ್ದು, ಎಲ್‌ಐಸಿ ಮತ್ತು ಕೆಎಸ್‌ಆರ್‌ಟಿಸಿ ಘಟಕ ಮಾರ್ಗದ ಬಳಿ ಚರಂಡಿಗಳು ಮಾಯವಾಗಿರುವುದಾಗಿ ಸ್ಥಳೀಯರು ಹೇಳುತ್ತಾರೆ.
ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿ ಗಲೀಜು ನೀರು ತುಂಬಿಕೊಂಡಿದ್ದು, ಹುಳುಗಳು ಹಾಗೂ ಹಾವುಗಳು ಕಾಣಿಸಿಕೊಳ್ಳುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ನಾಗರಿಕರು ಆತಂಕದಲ್ಲಿ ಓಡಾಡುವಂತಾಗಿದೆ.
ಕೆಪಿಟಿಸಿಎಲ್ ವತಿಯಿಂದ ಚರಂಡಿಗಳ ಮಧ್ಯೆ ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಿರುವುದರಿಂದ ಮಳೆ ನೀರು ಸರಿಯಾಗಿ ಹರಿಯದೆ ರಸ್ತೆ ಹಾನಿಗೀಡಾಗುತ್ತಿದೆ.
ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿದ್ದು ನೂರಾರು ಬಸ್‌ಗಳು ಮತ್ತು ವಾಹನಗಳು ಸಂಚರಿಸುವುದರಿಂದ ಅಪಾಯದ ಭೀತಿ ಹೆಚ್ಚಾಗಿದೆ. ಕಸದ ವಾಹನಗಳು ಒಂದು ವಾರದಿಂದ ಬಾರದಿರುವುದು ಮತ್ತು ಜಾಗೃತಿ ಕಾರ್ಯವೂ ನಡೆಯದಿರುವುದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ.

0 Comments