ಮದುವೆಯಾದ 6ನೇ ದಿನವೇ ಹುಡುಗನಿಗೆ ಶಾಕ್..!


ಮ್ಯಾರೇಜ್ ಬ್ರೋಕರ್ ಎಡವಟ್ಟಿಗೆ ನವ ವಿವಾಹಿತನ ಜೀವನದಲ್ಲಿ ಬಿರುಗಾಳಿ


ಹಾವೇರಿ : ರಾಣೇಬೆನ್ನೂರು
ಮದುವೆಯಾದ ಕೇವಲ ಆರು ದಿನಗಳಲ್ಲೇ ನವವಿವಾಹಿತನ ಬದುಕು ತಲ್ಲಣಗೊಂಡ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ತುಮ್ಮಿನಕಟ್ಟಿ ಗ್ರಾಮದ ನಿವಾಸಿ ರವಿ ಜವಳಿ ಎಂಬುವವರು, ಮದುವೆಗೆ ಮೊದಲು ಪ್ರಮುಖ ವಿಚಾರವನ್ನು ಮುಚ್ಚಿಟ್ಟು ವಂಚನೆ ನಡೆಸಲಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಫೆಬ್ರವರಿ 06ರಂದು ಹೀರೆಕೆರೂರಿನ ದುರ್ಗಾದೇವಿ ದೇವಸ್ಥಾನದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಗಿರಿಯಾಪುರ ಗ್ರಾಮದ ರೇಖಾ ಕೆ ಎಂಬಾಕೆಯೊಂದಿಗೆ ರವಿ ಜವಳಿ ವಿವಾಹವಾಗಿದ್ದರು. ಆದರೆ ಮದುವೆಯ ನಂತರ ರೇಖಾಗೆ ಮುಂಚೆಯೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿರುವ ವಿಚಾರ ತಿಳಿದು ರವಿ ಶಾಕ್‌ಗೆ ಒಳಗಾಗಿದ್ದಾರೆ.
ಮದುವೆಗೆ ಮೊದಲು “ಎರಡು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದೇನೆ” ಎಂದು ಹೇಳಿದ್ದ ರೇಖಾ, ವಾಸ್ತವದಲ್ಲಿ ತನ್ನ ಮೊದಲ ಮದುವೆ ಮತ್ತು ಮಕ್ಕಳ ವಿಚಾರವನ್ನು ಮುಚ್ಚಿಟ್ಟಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಈ ಮದುವೆ ದಂಜನ್ ನಾಯಕ್ ಹಾಗೂ ಶಾರದಮ್ಮ ಎಂಬ ಮ್ಯಾರೇಜ್ ಬ್ರೋಕರ್‌ಗಳ ಮೂಲಕ ನಡೆದಿದ್ದು, ಬ್ರೋಕರ್‌ಗಳ ನಿರ್ಲಕ್ಷ್ಯ ಹಾಗೂ ಮೋಸದಿಂದಲೇ ಈ ಪರಿಸ್ಥಿತಿ ಉಂಟಾಗಿದೆ ಎಂದು ರವಿ ಜವಳಿ ಆರೋಪಿಸಿದ್ದಾರೆ.
ಸದ್ಯ ರೇಖಾ ಹಾಗೂ ಮ್ಯಾರೇಜ್ ಬ್ರೋಕರ್‌ಗಳ ವಿರುದ್ಧ ವಂಚನೆ ಆರೋಪದಡಿ ಹಳಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ವರದಿ : ದೀಪಕ ಉಪಳೆ

Post a Comment

0 Comments